"ಕತ್ತೆಗಳು ಸಾರ್ ಕತ್ತೆಗಳು"
|
ಕತ್ತೆ ಕುದುರೆಯ ಹಾಗೆ ಇರುವ ಆದರೆ ಕುದುರೆ ಅಲ್ಲದ ಕುದುರೆಯ ವಂಶಕ್ಕೆ ಸೇರಿದ ಜೀವಿ. ಆದರೆ ಇದು ಹೀನ ಜಾತಿಯ ಪ್ರಾಣಿ ಆದುದರಿಂದ ಇದನ್ನು ಎಲ್ಲರು ಕತ್ತೆ ಎಂದು ಹೀಗಳೆಯುತ್ತಾರೆ. ಜೀಬ್ರ ಎಂಬುದು ಇದೇ ವಂಶಕ್ಕೆ ಸೇರಿದ ಮಿಶ್ರ ಜಾತಿಯ ವಿದೇಶದಿಂದ ಆಮದು ಮಾಡಿದ ಪ್ರಾಣಿ.
ದನ, ಎಮ್ಮೆ, ಆಡು ಹಾಗೂ ಒಂಟೆಯ ಹಾಲು ಕುಡಿಯುವ ಮನುಷ್ಯರಾರೂ ಕತ್ತೆ ಹಾಲು ಕುಡಿಯುವುದಿಲ್ಲ. ಇದು ಕತ್ತೆಯ ಬಗ್ಗೆ ಇರುವ ಕೀಳರಿಮೆ ಕಾರಣವಾಗಿ ಎಂದು ತೋರುತ್ತದೆ. ಆದರೆ ಇದರಿಂದ ಸತ್ಯವಾದ ಲಾಭ ಆಗುವುದು ಕತ್ತೆಮರಿಗೆ. ಅದರ ಪಾಲಿನ ಹಾಲನ್ನು ಯಾರೂ ಕದ್ದು ಕುಡಿಯುವುದಿಲ್ಲ. ಹೀಗೆ ನೋಡಿದರೆ ಕತ್ತೆಮರಿ ಬಹು ಭಾಗ್ಯಶಾಲಿ.
ಕತ್ತೆಗೆ ಸಂಸ್ಕೃತದಲ್ಲಿ "ಗಾರ್ಧಬ" ಎಂಬ ಶುಭ ನಾಮವಿದೆ. ಹಿಂದಿಯಲ್ಲಿ "ಗಧಾ" ಎಂದೂ, ತಮಿಳ್ ಹಾಗೂ ಮಲಯಾಳಂನಲ್ಲಿ "ಕಳ್ಹುದ" ಎಂದೂ ತೆಲುಗಿನಲ್ಲಿ "ಗಾಡಿದ" ಎಂದೂ ಕರೆಯುತ್ತಾರೆ. "ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ" ಎಂದು ಹಿರಿಯರು ಹೇಳಿದ ಗಾದೆ ನಿಜವಾಗಿಯೂ ಕತ್ತೆಗೆ ಮಾಡಿದ ಮಹಾ ದ್ರೋಹ ಹಾಗೂ ಅವಮಾನ. ಕತ್ತೆಯನ್ನು ಕನ್ನಡದಲ್ಲಿ ಮುದ್ದಾಗಿ "ಕತ್ತೇ" ಎಂದು ಕರೆಯುವ ಅಷ್ಟು ಸೊಗಸಾಗಿ ಬೇರೆ ಭಾಷೆಗಳಲ್ಲಿ ಕರೆಯಲು ಆಗುವುದಿಲ್ಲ ಎಂಬುದು ಸತ್ಯ.
"ಕಾರ್ಯವಾಸಿ ಕತ್ತೆ ಕಾಲು ಹಿಡಿ" ಎನ್ನುವ ಗಾದೆ ಯಾರೋ ಕತ್ತೆಯ ಒದೆ ತಿಂದ ದುಷ್ಟ ಹಾಗೂ ಸೇಡಿನ ಮನೋಭಾವದ ವ್ಯಕ್ತಿ ಮಾಡಿದ್ದಿರಬೇಕು. ಒದೆ ಖಂಡಿತ ಎಂದು ತಿಳಿದ ಯಾರಾದರು ಕತ್ತೆ ಕಾಲೋ ಬಾಲವೋ ಹಿಡಿಯುತ್ತಾರೇನು ?
ಕತ್ತೆಗೆ ಕುದುರೆಯ ಎತ್ತರವಿಲ್ಲ ಮತ್ತು ಕುದುರೆಯ ಹಾಗೆ ಓಡಲು ಬರುವುದಿಲ್ಲ, ಆದುದರಿಂದ ಇದನ್ನು ಕುದುರೆ ಓಟದ ಪಂದ್ಯದಲ್ಲಿ ಓಡಿಸಲಾಗುವುದಿಲ್ಲ. ಕತ್ತೆ ಒಂದು ಸಸ್ಯಾಹಾರಿ ಪ್ರಾಣಿ. ಆದರೆ ಇದಕ್ಕೆ ಕಸ, ಹುಲ್ಲು, ಪ್ಲಾಸ್ಟಿಕ್ ಮತ್ತು ರಸ್ತೆಯಲ್ಲಿ ಸಿಗುವ ಯಾವುದೇ ವಸ್ತುವನ್ನು ತಿಂದು ಅರಗಿಸಿಕೊಳ್ಳುವ ಶಕ್ತಿ ಇದೆ. ಆದುದರಿಂದ "ಕತ್ತೆ ಮೇದಲ್ಲಿ ಮತ್ತೆ ಮೇವಿಲ್ಲ" ಎಂದು ಹೇಳುತ್ತಾರೆ.
ನಮ್ಮ ಗಣಿತದ ಮೇಸ್ಟ್ರು ಒಮ್ಮೆ ನಮ್ಮ ಸಹಪಾಟಿ ರಾಮುವನ್ನು ದನಕ್ಕೆ ಬಡಿಯುವ ಹಾಗೆ ಬಡಿಯುವಾಗ ಅವನು ಕರ್ಕಶವಾಗಿ ಕೂಗಿದನು. ಆವಾಗ ಮೇಷ್ಟ್ರು "ಕತ್ತೆ ತರ ಕೂಗಬೇಡ, ಗೂಬೆ" ಎಂದು ಹೇಳಿದರು. ಕತ್ತೆಗೂ ಗೂಬೇಗು ಏನು ಸಂಬಂಧ ಎಂದು ನಮಗೆ ಅರ್ಥವಾಗಲಿಲ್ಲ. ಆದರೆ ಮೇಷ್ಟ್ರ ಹತ್ತಿರ ಕೇಳಲು ಯಾರಿಗೂ ಧೈರ್ಯವಿರಲಿಲ್ಲ. ದನದ ಹಾಗೆ ಏಟು ತಿನ್ನಬೇಕಾಗಬಹುದು ಎನ್ನುವ ಭಯದಿಂದಯಾರೂ ಬಾಯಿ ಬಿಡಲಿಲ್ಲ.
ನಮ್ಮ ಅಮ್ಮ ದಿನಾ ಸಂಜೆ ಭಜನೆ ಹಾಡುತ್ತಾರೆ. ಆವಾಗಲೆಲ್ಲ ನಮ್ಮ ಅಪ್ಪ ಮನೆಯ ಹೊರಗೆ ಬಂದು ನಿಂತುಕೊಳ್ಳುತ್ತಾರೆ. "ಏಕಪ್ಪ ನೀವು ಈ ಹೊತ್ತೆಲ್ಲ ಹೊರಗೆ ನಿಂತು ಸೊಳ್ಳೆಯ ಕಡಿತಕ್ಕೆ ಬಲಿಯಾಗುತ್ತೀರಾ ?" ಎಂದು ಕೇಳಿದಾಗ, ಅಪ್ಪ ಹೇಳಿದರು, "ನೋಡಪ್ಪ, ನಿನ್ನ ಅಮ್ಮ ಹೀಗೆ ಕತ್ತೆ ತರ ಹಾಡುವಾಗ ನಮ್ಮ ನೆರೆಮನಯವರೆಲ್ಲ ನಾನು ಒಳಗಡೆ ನಿನ್ನ ಅಮ್ಮನನ್ನು ಹೊಡೆಯುತ್ತೇನೆಂದು ತಪ್ಪು ತಿಳಿದು ಕೊಳ್ಳದಿರಲು ಹೀಗೆ ಹೊರಗೆ ನಿಂತು ಕೊಳ್ಳುತ್ತೇನೆ".
ಧನ್ಯವಾದ: ಫಡ್ನಿಸ್ |
ಹೀಗೆ ನನ್ನ ಸಂಶಯ ಸಂಶಯವಾಗಿಯೇ ಉಳಿಯಿತು. ಹಾಗಿರುವಾಗ ಒಂದು ದಿನ ನಮ್ಮ ದೂರದ ಸಂಬಂಧಿ ಜಟಾಯು ಮಾಮ ಮನೆಗೆ ಬಂದರು. ಅಪ್ಪ ಅವರನ್ನು ಊಟ ಮಾಡೀನೇ ಹೋಗಬೇಕು ಎಂದು ಒತ್ತಾಯ ಮಾಡಿದರು. ಆಗ ಅಮ್ಮ ಅಪ್ಪನನ್ನು ಒಳಗೆ ಕರೆದು ಹೇಳಿದರು, "ಏನ್ರಿ, ನಿಮಗೆ ಸ್ವಲ್ಪಾನಾದ್ರೂ ಬುದ್ಧಿ ಇದ್ಯೆನ್ರಿ ? ಈ ಜಟಾಯು ಬಂದ್ರೆ ಕತ್ತೆ ತರ ಮಾಡಿದ್ದೆಲ್ಲ ತಿಂದು ಹೋಗ್ತಾರೆ. ಮನೇಲಿರೋ ನಮ್ಮ ಬಗ್ಗೆ ಏನಾದ್ರೂ ಕಾಳಜಿ ಇದ್ಯೆನ್ರಿ ನಿಮಗೆ ?"
ನಮ್ಮ ನೆರೆಮನೆಯ ಮಾಲಿನಿ ಆಂಟಿ ಯಾವಾಗಲು ಅಮ್ಮನ ಹತ್ತಿರ ಅವರ ಅತ್ತೆಯನ್ನು "ಕತ್ತೆ" ಎಂದೇ ಕರೆಯುತ್ತಾರೆ. ಅಮ್ಮ, "ಯಾಕ್ರೀ ಮಾಲಿನಿ ಹೀಗೆ ಹೇಳ್ತೀರಾ ?" ಎಂದು ಕೇಳಿದರೆ ಮಾಲಿನಿ ಆಂಟಿ ಹೇಳ್ತಾರೆ, "ನೋಡ್ರೀ ಅಕ್ಕ, ಈ ಮುದಿ ಕತ್ತೆಗೆ ಯಾವಾಗ ನೋಡಿದರು ನನ್ನ ತಪ್ಪು ಕಂಡು ಹಿಡಿಯೋದೇ ಕೆಲಸ. ನೀವೂ ಇದ್ದೀರಾ, ದಿನಾ ನನ್ಹತ್ರ ಊಟ ಆಯ್ತಾ ? ಅಂತ ಕೇಳ್ತೀರಾ. ಈ ಕತ್ತೆಗೆ ನಾನ್ ಸತ್ರು ಬೇಜಾರಿಲ್ಲ. ಪಾಪ ಸಂಜೆ ಬರುವಾಗ ನಮ್ಮೋರ್ ಹತ್ರಾನು ಫಿರ್ಯಾದಿ ಮಾಡಿ ಜೀವನ ಎಲ್ಲ ಹಾಳು ಮಾಡ್ತಾರೆ. ನೀವೇ ಹೇಳಿ ನಾನು ಏನ್ ಮಾಡ್ಲಿ ?"
ಆಮೇಲೆ ಒಂದು ದಿನ ಸಂಜೆ ಮಾಲಿನಿ ಅವರ ಅತ್ತೆ ರತ್ನಮ್ಮ ಅವರು ಅಮ್ಮನ ಹತ್ತಿರ ಹೇಳಿದ್ದು ಕೇಳಿದೆ, "ರೀ ಭಾರತಿ ಅವ್ರೆ, ಬನ್ರಿ ಸ್ವಲ್ಪ ಹೊತ್ತು ಮಾತಾಡೋಣ. ಎಷ್ಟು ದಿನ ಆಯ್ತು ನಿಮ್ಹತ್ರ ಒಂದು ಮಾತಾಡಿ. ನಮ್ಮನೆ ಕತ್ತೆ ತವರುಮನೆಗೆ ಹೋಗಿದೆ. ಮನೇಲಿದ್ರೆ ಯಾವಾಗಲೂ ಏನಾದ್ರೂ ಅವಾಂತರ ಮಾಡ್ತಾನೆ ಇರುತ್ತೆ. ಈಗಲೇ ಸ್ವಲ್ಪ ಶಾಂತಿಯಿಂದ ಇರೋಕ್ಕಾಗುತ್ತೆ. ಪಾಪ ನಮ್ಮ ಗೋಪಿ ಹಸುವಿನಂಥ ಸ್ವಭಾವ. ಇವಳಾದ್ರೆ ಜಗಳಗಂಟಿ ಶೂರ್ಪನಖಿ ತರದ ಹುಡುಗಿ. ಎಲ್ಲಿಂದ ಸಿಕ್ತೋ ಇವಂಗೆ, ನಮ್ಮ ಹಣೆಬರಹ".
ನಮ್ಮಪ್ಪ ಅಮ್ಮನನ್ನು, ಅಮ್ಮ ಜಟಾಯು ಮಾಮನನ್ನು ಕತ್ತೆ ಎಂದು ಕರೆಯತ್ತಾರೆ. ಜಟಾಯು ಮಾಮ ಒಮ್ಮೆ ಹೇಳಿದ್ರು, "ನಿಮ್ಮ ಗಣಿತದ ಮೇಷ್ಟ್ರು ಒಂದು ದೊಡ್ಡ ಕತ್ತೆ ಕಣಪ್ಪ. ಚಿಕ್ಕ ಮಕ್ಕಳನ್ನೆಲ್ಲ ಕೆಟ್ಟದಾಗಿ ಬಡೀತಾನೆ. ಏನು ಒಂದು ಚೂರು ಮನುಷ್ಯತ್ವಾನೆ ಇಲ್ಲಾಂದ್ರೆ ?". ಈ ರಾಮು ಎಂಬ ಹುಡುಗ ಅವ್ರ ಮಗ.
ನಮ್ಮ ಶಾಲೆಯ ಮಿಟುಕಲಾಡಿ ಹಾಗು ಅಹಂಕಾರಿ ಎಂದು ಹೆಸರು ಪಡೆದ ಅಭಿರಾಮಿ ಒಮ್ಮೆ, ನಮ್ಮ ಮುಂದಿನ ಬೆಂಚಿನಲ್ಲಿ ಕುಳಿತಾಗ ಬಹು ಪೋಕ್ರಿಯಾದ ರಾಜು ಎಂಬ ಹುಡುಗ ಅವಳ ಪಾನಿ ಟೈಲ್ ಗೆ ಒಂದು ಚೀಟಿ ಕಟ್ಟಿ ಹಾಕಿದ. ಅದರಲ್ಲಿ "ಇದು ಕತ್ತೆ ಬಾಲ" ಎಂದು ಬರೆದಿತ್ತು. ಇದು ಕೈಗೆ ಸಿಕ್ಕಿದಾಗ ಅವಳು ತಿರುಗಿ ನೋಡಿದಳು. ನಾನೇನೂ ಮಾಡದೆ ಇದ್ದರೂ ಅವಳು ನನ್ನ ಕೆನ್ನೆಗೆ ಹೊಡೆದು "ನೀನೆ ದೊಡ್ಡ ಹೇಸರಗತ್ತೆ" ಎಂದು ಬೈದಳು. ನನಗೆ ತುಂಬಾ ಸಿಟ್ಟು ಬಂದು ಅವಳನ್ನು ವಾಚಾಮಗೋಚರವಾಗಿ ಬಯ್ಯಬೇಕು ಅಂದುಕೊಂಡೆ. ಆದರೆ ಅವಳ ಕೆಂಪಾದ ಕೆನ್ನೆ ಹಾಗೂ ಮಿಂಚುವ ಕಣ್ಣುಗಳನ್ನು ನೋಡಿ ನನಗೆ ಏನೇನೂ ಹೇಳಲು ಆಗಲಿಲ್ಲ. ನನ್ನ ಬೇಸರ ಕಂಡು ಪಾಪ ರಾಮು ಹೇಳಿದ, "ಹೋಗಲಿ ಕಣೋ, ನೀನೇನೂ ಮಾಡದೆ ಇದ್ದರೂ ಅವಳು ನಿನಗೆ ಹೊಡೆದಳು ಮತ್ತೆ ಬೈದಳು. ಸತ್ಯವಾಗಿ ಅವಳೇ ಕಣೋ ಕತ್ತೆ, ನೀನಲ್ಲ." ಎಂದು. ಹಾಗೆ ನನ್ನ ನೊಂದ ಮನಕ್ಕೆ ಸ್ವಲ್ಪ ಸಮಾಧಾನವಾಯಿತು.
"Law is an ass" ಎಂದರೆ "ನಿಯಮ ಒಂದು ಕತ್ತೆ" ಎಂದು ಯಾರೋ ತಿಳಿದವರು ಹೇಳಿದ್ದಾರಂತೆ. ನಮ್ಮ ಮಂತ್ರಿಗಳು ಹಾಗೂ ರಾಜಕಾರಣಿಗಳು ಒಬ್ಬರು ಮತ್ತೊಬ್ಬರನ್ನು "ಕತ್ತೆ" ಎಂದು ಕರೆಯುತ್ತಾ ಇರುತ್ತಾರೆ. ಆವಾಗಾವಾಗ ವಿಧಾನಸಭೆಯಲ್ಲಿ ಕತ್ತೆ ನಾಯಿಗಳ ತರ ಹೊಡೆದಾಡಿಕೊಳ್ಲೋದನ್ನ ನಾವು ದೂರದರ್ಶನದಲ್ಲಿ ಕಾಣುತ್ತೇವೆ. ಆದರೆ ಸತ್ಯದಲ್ಲಿ ಇವರೆಲ್ಲ ಜನರನ್ನು ಕತ್ತೆಗಳು ಎಂದು ತಿಳಿದು ಹೊರಲಾಗದ ಕರಗಳನ್ನೆಲ್ಲ ನಮ್ಮ ಬೆನ್ನ ಮೇಲೆ ಹೊರಿಸುತ್ತಾರೆ ಎಂದು ಮಾಲಿನಿ ಆಂಟಿಯವರ ಗಂಡ ಗೋಪಿ ಅಂಕಲ್ ಹೇಳ್ತಾರೆ. ಅವರನ್ನೇ "ಯಾವಾಗ್ ನೋಡಿದರೂ ಆಫೀಸ್ ಕೆಲಸ ಅಂತ ಕತ್ತೆ ತರ ದುಡೀತಾನೆ. ಮನೆ ಕಡೆ ಚಿಂತೇನೆ ಇಲ್ಲ ಹುಡುಗನ್ಗೆ" ಅಂತ ಅವರ ಅಪ್ಪ ಬಯ್ಕೊಂತಾರೆ.
ಈ ಕತ್ತೆ ಬಾಲದ ಕಥೆ ಉದ್ದುದ್ದಕ್ಕೆ ಬೆಳೆಯುತ್ತಾ ಇದೆ. ನೋಡ್ತಾ ಹೋದ್ರೆ ಎಲ್ಲರೂ ಎಲ್ಲರನ್ನ "ಕತ್ತೆ" ಅಂತ ಕರೀತಾರೆ. ಸ್ವತಹ ತಮ್ಮನ್ನೂ ಕತ್ತೆ ಅಂತ ಬಾಕಿಯವರು ಕರೆಯುತ್ತಾರೆ ಅಂತ ಯಾರಿಗೂ ಗೊತ್ತಿಲ್ಲ. ನನಗೆ ಮಾತ್ರ ಗೊತ್ತಿದೆ, ಯಾಕೇಂದ್ರೆ ಆ ಅಭಿರಾಮಿ ನನ್ನ ಮುಂದೇನೆ "ಹೇಸರಗತ್ತೆ" ಎಂದು ಕರೆದದ್ದು. ಸತ್ಯವಾಗಿ ನೋಡಿದ್ರೆ ಅವಳೇ ಒಳ್ಳೆಯವಳು ಅಂತನಿಸುತ್ತೆ. ಏನಿದ್ರೂ ಮುಂದೇನೆ ಹೇಳಿದಳು. ಹಿಂದಿನಿಂದ ಹೀಗಳೆಯುವವರೇ ಜಾಸ್ತಿ ಇರುವ ಲೋಕದಲ್ಲಿ ಮುಖ ನೋಡಿ ಮುಂದೇನೆ ಹೇಳಿದ ಕೆಂಪು ಗಲ್ಲದ ಪಾನಿ ಟೈಲ್ ಹುಡುಗಿ ಸ್ವಲ್ಪ ಬೇರೆ ತರ ಕಾಣಿಸಿದಳು. ಇದು ಆಶ್ಚರ್ಯ ಅಲ್ಲವೇ ?
ಏನೇ ಹೇಳಿದರೂ ಕತ್ತೆ ಎಂಬ ಮುದ್ದಾದ ಸಾಧು ಪ್ರಾಣಿಯನ್ನು ಹೀಗಳೆಯುವ ಮನುಷ್ಯರ ಸ್ವಭಾವ ನನಗೆ ತೀರ ಇಷ್ಟವಾಗಲಿಲ್ಲ. ಎಷ್ಟು ಭಾರ ಬೆನ್ನ ಮೇಲೆ ಹೊರಿಸಿದರೂ ಯಾವುದೇ ರೀತಿಯಲ್ಲಿ ವಿರೋಧಿಸದೆ ಅನವರತ ಕೆಲಸ ಮಾಡುವ ಕತ್ತೆಯೇ ನಿಜವಾದ ಕರ್ಮಜೀವಿ.
ಮನುಷ್ಯರು ಒಬ್ಬರು ಒಬ್ಬರನ್ನು "ಕತ್ತೆ" ಎಂದು ಕರೆಯುವುದಲ್ಲದೆ ಕತ್ತೆಯ ಹಾಗೆ ಆಗಲು ಯಾರೂ ಶ್ರಮಿಸುವುದಿಲ್ಲ. ಕಷ್ಟಪಟ್ಟು ಕೆಲಸ ಮಾಡುವುದು ಯಾರಿಗೂ ಇಷ್ಟವಲ್ಲ. ಆದರೆ ಎಲ್ಲರ ಅಭಿಪ್ರಾಯದಲ್ಲಿ ತನ್ನ ಹೊರತು ಬಾಕಿ ಎಲ್ಲರೂ ಕತ್ತೆಗಳು. ಹೀಗೆ ಇಷ್ಟವಲ್ಲದೆ ಇದ್ದರೂ ಎಲ್ಲರೂ ಕತ್ತೆಗಳೇ. ಕುರಿಗಳು ಸಾರ್ ಕುರಿಗಳು ಎಂದು ಯಾರೋ ದೊಡ್ಡ ಮನುಷ್ಯರು ಬರೆದಿದ್ದರಂತೆ. ಸತ್ಯದಲ್ಲಿ ಈ ಲೋಕವೆಲ್ಲ "ಕತ್ತೆಗಳು ಸಾರ್ ಕತ್ತೆಗಳು" !
Dr. Punned-it
No comments:
Post a Comment
Laugh Out Loud [LOL]